ಕೃಷಿನಾಡು

ಕರ್ನಾಟಕಕ್ಕೆ ಬರೀ ‘ಚಿಪ್ಪು’, ಆಂಧ್ರ-ಬಿಹಾರಕ್ಕೆ ಮಾತ್ರ ‘ತುಪ್ಪ’! ಇದೇನಾ ನಮ್ಮ ತೆರಿಗೆಗೆ ನೀವು ನೀಡುವ ಗೌರವ?

Spread the love

ಕೇಂದ್ರ ಸರ್ಕಾರದ ತಾರತಮ್ಯ ನೀತಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಈ ಅಂಕಿ-ಅಂಶಗಳನ್ನು ನೋಡಿದರೆ ಪ್ರತಿಯೊಬ್ಬ ಕನ್ನಡಿಗನ ರಕ್ತ ಕುದಿಯದೇ ಇರದು!

ಪ್ರಜಾವಾಣಿ ಪತ್ರಿಕೆಯ ತುಣುಕು, 21 ಜನವರಿ, 2026

“ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ” – ಈ ಸುದ್ದಿಯ ಸಾರಾಂಶ ಇಷ್ಟೇ: ಕರ್ನಾಟಕದ ಅಭಿವೃದ್ಧಿಗಿಂತ ಕೇಂದ್ರಕ್ಕೆ ತನ್ನ ‘ಕುರ್ಚಿ’ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಿರುವ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಬಂಪರ್ ಕೊಡುಗೆಗಳ ಮಹಾಪೂರವೇ ಹರಿದಿದೆ. ಆದರೆ ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಸಿಕ್ಕಿದ್ದೇನು? ಬರೀ ಚಿಕ್ಕಾಸು!

ಒಮ್ಮೆ ಈ ತಾರತಮ್ಯದ ಪಟ್ಟಿಯನ್ನು ನೋಡಿ:

ಆಂಧ್ರಪ್ರದೇಶಕ್ಕೆ ಸಿಕ್ಕಿದ್ದೇನು? (ಮೈತ್ರಿ ಧರ್ಮ ಪಾಲನೆಗೆ!)

* ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಪುನರುಜ್ಜೀವನಕ್ಕೆ: ₹11,440 ಕೋಟಿ!
* ಅಮರಾವತಿ ಅಭಿವೃದ್ಧಿಗೆ: ₹4,200 ಕೋಟಿ!
* ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ: ₹3,653 ಕೋಟಿ!
* ಹೊಸ ರೈಲು ಮಾರ್ಗಗಳಿಗೆ: ಸಾವಿರಾರು ಕೋಟಿಗಳು!

ಆ ರಾಜ್ಯಗಳಿಗೆ ಅಭಿವೃದ್ಧಿಗಾಗಿ ಹಣದ ಹೊಳೆಯೇ ಹರಿಯುತ್ತಿದೆ. ಆದರೂ ಆ ರಾಜ್ಯಗಳ (ಅದರಲ್ಲೂ ಬಿಹಾರಿಗಳು ಹೆಚ್ಚು) ಜನ ಕೆಲಸ ಹುಡುಕಿಕೊಂಡು ಬರೋದು ಬೆಂಗಳೂರಿಗೆ!

ಕರ್ನಾಟಕಕ್ಕೆ ಸಿಕ್ಕಿದ್ದೇನು?

* ನಮ್ಮ ಮೆಟ್ರೋ 3ನೇ ಹಂತಕ್ಕೆ ಅನುಮತಿ ಸಿಕ್ಕಿದೆ, ಆದರೆ ಅದರಲ್ಲಿ ಕೇಂದ್ರದ ಪಾಲು ಕೇವಲ 20% ಅಷ್ಟೇ!
* ಬಳ್ಳಾರಿ-ಚಿಕ್ಕಜಾಜೂರು ರೈಲು ಮಾರ್ಗಕ್ಕೆ ₹3,432 ಕೋಟಿ.

ಕೇವಲ ಬೆರಳೆಣಿಕೆಯ ಯೋಜನೆಗಳಿಗೆ ಒಪ್ಪಿಗೆ ನೀಡಿ ಕೈತೊಳೆದುಕೊಂಡಿದೆ ಕೇಂದ್ರ ಸರ್ಕಾರ.

ನಾವು ಕಟ್ಟುವ ಜಿಎಸ್‌ಟಿ (GST) ಹಣದಲ್ಲಿ ಸಿಂಹಪಾಲು ಉತ್ತರ ಭಾರತಕ್ಕೆ ಮತ್ತು ಮಿತ್ರ ಪಕ್ಷಗಳ ರಾಜ್ಯಗಳಿಗೆ ಹೋಗುತ್ತಿದೆ. ನಮಗೆ ಮರಳಿ ಸಿಗುತ್ತಿರುವುದು ಬರೀ ಅಲ್ಪಸ್ವಲ್ಪ ಅನುದಾನ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಕೇಳಿದರೆ ಕೇಂದ್ರದ ಬೊಕ್ಕಸ ಖಾಲಿ ಎನ್ನುತ್ತಾರೆ, ಆದರೆ ಆಂಧ್ರಕ್ಕೆ ಮಾತ್ರ ಸಾವಿರಾರು ಕೋಟಿಗಳ ಪ್ಯಾಕೇಜ್ ಘೋಷಿಸಲು ಹಣ ಎಲ್ಲಿಂದ ಬರುತ್ತದೆ?

ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋದ 25ಕ್ಕೂ ಹೆಚ್ಚು ಸಂಸದರು ಏನು ಮಾಡುತ್ತಿದ್ದಾರೆ? ಸಂಸತ್ತಿನಲ್ಲಿ ರಾಜ್ಯದ ಪರವಾಗಿ ದ್ವನಿ ಎತ್ತಲು ನಿಮಗೆ ಭಯವೇ? ಅಥವಾ ನಿಮ್ಮ ಮೌನವೇ ಈ ಅನ್ಯಾಯಕ್ಕೆ ಸಮ್ಮತಿಯೇ? ರಾಜ್ಯದ ಜನತೆ ನಿಮ್ಮನ್ನು ದೆಹಲಿಗೆ ಕಳುಹಿಸಿದ್ದು ನಮ್ಮ ಹಕ್ಕನ್ನು ಕೇಳಲೆಯೇ ಹೊರತು, ಮೌನವಾಗಿ ಕುಳಿತು ಅನ್ಯಾಯ ಸಹಿಸಿಕೊಳ್ಳಲು ಅಲ್ಲ.

Leave a Reply

Your email address will not be published. Required fields are marked *